ನೇಸರನ ಕಿರಣಕ್ಕೆ ಮೈಯ್ಯೊಡ್ಡಿ,
ಜನರ ಕಣ್ಮನ ಸೆಳೆದು,
ಹೆಮ್ಮೆಯಿಂದ ಅರಳಿ
ನಿಂತಿರುವಳು ಕೆಂಗುಲಾಬಿ.
ತಂಗಾಳಿಗೆ ತಲೆದೂಗಿ,
ಇಬ್ಬನಿಯನು ಹೊದೆದುಕೊಂಡು,
ಹೂದೋಟದ ಅರಸಿಯಾಗಿ
ರಾರಾಜಿಸುತ್ತಿರುವಳು ಕೆಂಗುಲಾಬಿ.
ಸೌಂದರ್ಯವದು ತನಗೆ
ದೊರಕಿರುವ ವರವೆಂದು
ಭಾವಿಸಿ, ತಾನು ತ್ರಿಲೋಕ ಸುಂದರಿ
ಎಂದು ಹಿಗ್ಗಿದಳು ಕೆಂಗುಲಾಬಿ.
ಕಾಲಚಕ್ರ ಉರುಳಿತು,
ಅವಳ ಎಸಳು ಉದುರಿತು
ತನ್ನ ರೂಪ ಕೆಡುತ್ತಿದೆ
ಎಂದು ಮರುಗಿದಳು ಕೆಂಗುಲಾಬಿ.
ಇಂದು ತನ್ನನ್ನು ನೋಡಿ
ಹೊಗಳುವವರಿಲ್ಲ,
ಆನಂದಿಸುವವರಿಲ್ಲವೆಂದು
ಹಲುಬಿದಳು ಕೆಂಗುಲಾಬಿ.
“ಸೌಂದರ್ಯವದು ಕ್ಷಣಿಕ
ಒಳಿತಲ್ಲ ಅತಿಯಾದ ಹೆಮ್ಮೆ”
ಎಂದು ಅಲ್ಲೇ ಇದ್ದ
ಮೊಗ್ಗಿಗೆ ಹೇಳಿದಳು ಕೆಂಗುಲಾಬಿ.
ತನ್ನ ಮನದ ಅಹಂಕಾರವು
ತಕ್ಕ ಪಾಠ ಕಲಿಸಿತೆಂದು,
ಪಶ್ಚಾತಾಪದಿಂದ ರೋಧಿಸಿ
ಪ್ರಾಣ ಬಿಟ್ಟಳು ಕೆಂಗುಲಾಬಿ.
