ಸಮಯ ರಾತ್ರಿ ಹತ್ತು ಗಂಟೆ ಆಗಿತ್ತು. ಹೊರಗೆ ಜೋರಾಗಿ ಮಳೆ ಬರುತ್ತಿತ್ತು. ಮನೆ ಒಳಗೇ ಕಾಲ ಕಳೆಯೋಣವೇಂದರೆ ವಿಪರೀತ ಶೆಖೆ. ಅತ್ತ ಇತ್ತ ಹೊರಳಿ ಮಲಗಿದರೂ ನಿದ್ರೆ ಬರುವ ಯಾವ ಸೂಚನೆಯೂ ಕಾಣಿಸಲಿಲ್ಲ. ಹೊರಗೆ ಸುರಿಯುತ್ತಿದ್ದ ಮಳೆಯನ್ನಾದರೂ ನೋಡೋಣವೆಂದು ಮನೆಯ ಹೊರಗಿದ್ದ ಮೆಟ್ಟಿಲ ಮೇಲೆ ಕೂತೆ.
ಮಳೆ ಜೋರಾಗಿ ಸುರಿಯುತ್ತಲೇ ಇತ್ತು. ಮನಸ್ಸಿಗೆ ಸ್ವಲ್ಪ ಹಿತವೆನಿಸಿತು. ಧಾರಾಖಾರ ಮಳೆಯೊಂದಿಗೆ ಜೊರಾದ ಗುಡುಗು, ಕಣ್ಣಿಗೆ ಕುಕ್ಕುವ ಮಿಂಚು. ಇವೆಲ್ಲದರ ಜೊತೆ ತಂಗಾಳಿ. ಆದರೆ ಇಂದಿನ ತಂಗಾಳಿ ಎಂದಿನಂತೆ ಇರಲಿಲ್ಲ. ಮೂಗಿಗೆ ಯಾವುದೋ ರೀತಿಯ ಪರಿಮಳ ಬರುತ್ತಿತ್ತು. ಅದು ನನಗೆ ಪರಿಚಿತವಾದ ಪರಿಮಳ. ಕೂಡಲೇ ಮನೆಯ ಬಳಿ ರಂಜೆ ಹೂವಿನ ಮರವಿದೆ, ಆ ಹೂವಿನ ಪರಿಮಳವೇ ಗಾಳಿಯೊಂದಿಗೆ ಬೆರೆತು ನನ್ನ ನಾಸಿಕವನ್ನು ತಲುಪುತ್ತಿತ್ತು ಎಂಬುದರ ಅರಿವಾಯಿತು.
ಅಲ್ಲಿಯೇ ಪ್ರಕೃತಿ ಮಾತೆಯ ಸುಗಂಧ ದ್ರವ್ಯವನ್ನು ಆಸ್ವಾದಿಸುತ್ತಾ ಕುಳಿತೆ. ಮನಸ್ಸು ಹಾಗೆ ಬಾಲ್ಯದ ದಿನದತ್ತ ಸಾಗಿತು. ಬೇಸಿಗೆ ರಜೆ ಬಂತೆಂದರೆ ಊರಿಗೆ ಹೊಗುವ ಅಭ್ಯಾಸ. ದೊಡ್ಡಪ್ಪನ ಮನೆಯ ಬಳಿ ಒಂದು ರಂಜೆ ಮರವಿತ್ತು. ಪ್ರತಿನಿತ್ಯ ಮರದ ಕೆಳಗೆ ಬಿದ್ದ ಹೂವನ್ನು ಹೆಕ್ಕಿ ಮಾಲೆ ಮಾಡಿ ಮುಡಿದುಕೊಳ್ಳುವುದೆಂದರೆ ಎಲ್ಲಿಲ್ಲದ ಸಂತೋಷ ನನಗೆ.
ಒಮ್ಮೆ ಕೇರಳದಲ್ಲಿರುವ ಅಕ್ಕನ ಮನೆಗೆ ಮದುವೆಗೆಂದು ಹೋಗಿದ್ದೆ. ಆಗ ನನಗೆ ಸುಮಾರು ೫ ವರ್ಷ. ಅವಳ ಮನಗೆ ಹೋದಾಗ ನನ್ನ ಕಣ್ಣಿಗೆ ಮೊದಲು ಕಾಣಿಸಿದ್ದು ರಂಜೆ ಮರ. ಮನಸ್ಸು ತಡೆಯಲಿಲ್ಲ, ಅಲ್ಲಿ ಬಿದ್ದಿದ್ದ ರಂಜೆ ಹೂವುಗಳನ್ನು ಸಂಗ್ರಹಿಸಿ ಮಾಲೆ ಮಾಡಿ ಸಂತಸದಿಂದ ಮುಡಿದುಕೊಂಡೆ. ಆಗ ಅಲ್ಲಿ ಬಂದಿದ್ದ ಅಕ್ಕನ ನೆಂಟರು ನನ್ನನ್ನು ನೋಡಿ ನಗಲಾರಂಭಿಸಿದರು. ಅವರಿಗೆ ನಾನೊಬ್ಬ ವಿಚಿತ್ರ ಪ್ರಾಣಿಯಂತೆ ಕಾಣುತ್ತಿದ್ದನೋ ಏನೋ. ಹೀಗೆ ನನ್ನ ಅದ್ಭುತವಾದ ಬಾಲ್ಯದ ದಿನಗಳನ್ನು ಮೆಲಕು ಹಾಕುತ್ತಾ ಸಮಯ ಕಳೆದದ್ದು ಗೊತ್ತಾಗಲಿಲ್ಲ. ಅಷ್ಟರಲ್ಲಿ ಮಳೆಯೂ ನಿಂತಿತ್ತು. ನನ್ನ ಮೈ-ಮನವೂ ತಣ್ಣಗಾಗಿತ್ತು. ಮತ್ತೊಮ್ಮೆ ಆ ಪರಿಮಳವನ್ನು ಆಸ್ವಾದಿಸಿ ಸಂತಸದಿಂದ ಮನೆ ಒಳಗೆ ಹೋದೆ.
