ಅಳಿದ ಮೇಲೆ – ಒಂದು ಸ್ವಾರಸ್ಯಕರ ಓದು

ಮನುಷ್ಯ ಬದುಕಿಗೆ ವಿದಾಯ ಹೇಳಿದ ನಂತರ ಇತರರ ಮನಸ್ಸಿನಲ್ಲಿ ಉಳಿಯುವುದು ತಾವು ಬದುಕಿದ್ದ ವೇಳೆಯಲ್ಲಿ ಮಾಡಿದ ಕಾರ್ಯಗಳ, ಚಟುವಟಿಕೆಗಳ ಅನುಸಾರವಾಗಿ. ಈ ಜೀವನವೆಂಬ ಕಟ್ಟಡವು ನಿಂತಿರುವುದು ನಂಬಿಕೆಯಂಬ ಬುನಾದಿಯ ಮೇಲೆ. ಮೇಲಿನ ಕಾದಂಬರಿಯ ಮುಖ್ಯ ಸಾರ ಇದುವೇ ಆಗಿದ್ದು, ಕೆಲವು ಜವಾಬ್ದಾರಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಲೇಖಕರು ಭೇಟಿಯಾದ ವ್ಯಕ್ತಿಗಳನ್ನು , ಅನ್ವೇಷಣೆಯ ಪಥದಲ್ಲಿ ಅವರಿಗೆ ಎದುರಾದ ಸವಾಲುಗಳನ್ನು, ಹಿತ ಅಹಿತಕರ ಘಟನೆಗಳನ್ನು , ಸೋಲು ಗೆಲುವುಗಳನ್ನು ಕ್ರೋಢೀಕರಿಸಿ ಕಾದಂಬರಿಯ ಸ್ವರೂಪದಲ್ಲಿ ಬರೆಯಲಾಗಿದೆ.
ಈ ಕಾದಂಬರಿಯ ಕಥಾನಯಕ ಯಶವಂತರಾಯರು ವಿಭಿನ್ನ ಸ್ವಭಾವದ ವ್ಯಕ್ತಿ. ಅವರು ಕಾರಂತರಿಗೆ ಪರಿಚಯವಾಗುವುದು ಆಕಸ್ಮಿಕವಾಗಿ, ರೈಲಿನಲ್ಲಿ ಪ್ರಯಾಣ ಬಳಸುವ ವೇಳೆಯಲ್ಲಿ. ಪರಿಚಯ ಸ್ನೇಹವಾಗಿ, ಕ್ಷಣ ಕಾಲದ ಸ್ನೇಹ ಮತ್ತು ಆಗಾಗ್ಗಿನ ಭೇಟಿ ಮಾತುಕತೆ ನಂಬಿಕೆಯ ಮೇಲೆ ನಿಂತ ನಿಕಟ ಸಂಬಂಧವಾಗಿ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ. ಇದೇ ಯಶವಂತರಾಯರು ತಮ್ಮ ಕೊನೆಗಾಲದಲ್ಲಿ ಕೆಲವು ಕೆಲಸಗಳನ್ನು ಲೇಖಕರಿಗೆ ವಹಿಸಿ ಬದುಕಿಗೆ ವಿದಾಯ ಹೇಳುತ್ತಾರೆ. ಇವರು ತಮ್ಮ ಹುಟ್ಟೂರು, ವ್ಯಾಪಾರ, ವಹಿವಾಟು, ಸಂಸಾರ, ಬಂಧು ಬಳಗ, ಮಿತ್ರರನ್ನು ತ್ಯಜಿಸಿ ಮುಂಬೈನಲ್ಲಿ ನೆಲೆಸಿರುತ್ತಾರೆ. ಒಮ್ಮಿಂದೊಮ್ಮೆಲೇ ಎದುರಾದ ಜವಾಬ್ದಾರಿಗಳು ಸಾಕಷ್ಟು ಕ್ಲಿಷ್ಟಕರ ಎಂದು ಕಂಡರೂ, ಭಾಸವಾದರೂ, ಕಾರಂತರು ಕಾಳಜಿ ವಹಿಸಿ ಅದನ್ನು ನಿಭಾಯಿಸದ ರೀತಿಯೇ ಈ ಕಾದಂಬರಿಯ ಮುಖ್ಯ ಕಥೆ.
ಕಥೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದರೆ, ಮೊದಲ ಭಾಗ ಮುಂಬೈನಲ್ಲಿ (ಲೇಖಕರ ಮತ್ತು ಯಶವಂತರಾಯರ ಭೇಟಿ, ಪರಿಚಯ), ಎರಡನೇ ಭಾಗ ಶಿರಸಿಯಲ್ಲಿಯೂ (ಯಶವಂತರ ಹುಟ್ಟೂರಿನಲ್ಲಿ), ಮೂರನೇ ಭಾಗ ಕುಮುಟದಲ್ಲಿಯೂ (ಯಶವಂತರ ಪತ್ನಿಯ ಊರಿನಲ್ಲಿ) ಹಾಗು ಕೊನೆಯ ಭಾಗ ಪುಣೆಯಲ್ಲಿ( ಯಶವಂತರಾಯರ ಸ್ನೇಹಿತರ ಊರಲ್ಲಿ) ನಡೆಯುತ್ತದೆ.
ಇಡೀ ಕಾದಂಬರಿಯಲ್ಲಿ ಹಲವಾರು ಪಾತ್ರಗಳು ಕಾಣ ಸಿಗುತ್ತವೆ. ಎಲ್ಲರ ಸ್ವಭಾವ, ವ್ಯಕ್ತಿತ್ವ, ಗುಣ, ನಡವಳಿಕೆ, ನೀತಿ ರೀತಿ, ಆಚಾರ ವಿಚಾರ ಎಲ್ಲವೂ ಭಿನ್ನ. (ಒಂದೇ ಕುಟುಂಬದಕ್ಕೆ ಸೇರಿದ್ದವರಾದರೂ). ಹಣವೇ ಬದುಕು ಎಂದು ಬೀಗುವವರೂ, ರಕ್ತ ಸಂಬಂಧಿಕರ ಸುಖವೇ ತಮ್ಮ ಸುಖವೆಂದು ಭಾವಿಸುವವರು, ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ನಿಷ್ಠಾವಂತರೂ, ಹಣದ ಮೋಹಕ್ಕೆ ಒಳಗಾಗಿ ಮೋಸದ ದಾರಿಯಲ್ಲಿ ಸಾಗುವವರೂ, ಆಸ್ತಿಕರೂ, ನಾಸ್ತಿಕರೂ, ಮುಗ್ಧರೂ, ಇತರರನ್ನು ಗೌರವದಿಂದ ಕಾಣುವವರೂ ಕಾಣ ಸಿಗುತ್ತಾರೆ. ಒಟ್ಟಿನಲ್ಲಿ ಗುಣ ತ್ರಯಗಳ ಪರಿಚಯ ಎಂದರೆ ತಪ್ಪಾಗಲಾರದು. ಕಥೆ ಸಾಗುತ್ತ ಹೋದಂತೆ, ಸಮಸ್ಯೆಯೂ ಹಂತ ಹಂತವಾಗಿ ಬಗೆ ಹರಿಯುವುದನ್ನು ಗಮನಿಸಬಹುದು.

ಈ ಪುಸ್ತಕದ ಮೊದಲ ಕೆಲವು ಪುಟಗಳನ್ನು ಓದಿದಾಗ ಕಥೆಯ ಗಂಧ ಗಾಳಿ ಇಲ್ಲದೇ ದಟ್ಟ ಅರಣ್ಯದಲ್ಲಿ ಕಳೆದು ಹೋದಂತೆ ಅನುಭವವಾದದ್ದು ನಿಜ. ಆದರೆ ಕಥೆ ಓದುತ್ತಾ ಸಾಗಿದಂತೆ, ಅದರ ರುಚಿ ಹೆಚ್ಚುತ್ತಲೇ ಹೋಯಿತು.
ನನಗೆ ಈ ಕೃತಿಯಲ್ಲಿ ಬಹಳ ಇಷ್ಟವಾದ ಒಂದು ವಿಚಾರವೆಂದರೆ ಲೇಖಕರು ಉಪಮೆಗಳನ್ನು ಬಳಸಿದ ರೀತಿ. ಹತ್ತಾರು ಉಪಮೆಗಳು ಆಲೋಚನೆಯ ದೃಷ್ಟಿಕೋನವನ್ನು ಬದಲಿಸಿದರೆ, ಇನ್ನು ಕೆಲವು ಉಪಮೆಗಳು ಹೊಟ್ಟೆ ತುಂಬಾ ನಗುವಂತೆ ಮಾಡಿತು.ಉಪ್ಪು ನೀರಿನಲ್ಲಿ ಹಾಕಿದ ಮಾವಿನಕಾಯಿಯನ್ನು ಅಜ್ಞಾತ ವಾಸಕ್ಕೆ ಹೋಲಿಸಿದ ರೀತಿ, ಮನುಷ್ಯನ ಹಾವ ಭಾವಗಳನ್ನು ಪ್ರಕೃತಿಯ ಚಟುವಟಿಕೆಗಳಿಗೆ ಹೋಲಿಸಿದ್ದು ಹೀಗೆ ಉಪಮೆಗಳು ಕೃತಿಯ ಮೆರುಗನ್ನು ಹೆಚ್ಚಿಸಿದವು.
ಕಥೆಗೆ ಕೊರತೆ ಬಾರದಂತೆ ಲೇಖಕರು ಪ್ರಕೃತಿಯ ಸೊಬಗನ್ನು ಬಣ್ಣಿಸಿದ ರೀತಿಯಂತು ಅತ್ಯದ್ಭುತ. ಲಾಕ್ ಡೌನಿನಂತ ಪರಿಸ್ಥಿತಿಯಲ್ಲಿ, ನನ್ನ ಕೋಣೆಯ ನಾಲ್ಕು ಗೋಡೆಯ ಮಧ್ಯೆ ನಾನು ಬಂಧಿಯಾಗಿದ್ದರು ಈ ಪುಸ್ತಕವನ್ನು ಓದಿ ಮುಗಿಸುವ ವೇಳೆಗೆ ಊರೆಲ್ಲ ಸುತ್ತಿ ಬಂದ ಅನುಭವವಾಯಿತು. ಕೃತಿಯಲ್ಲಿ ಉಲ್ಲೇಖಿಸಿರುವ ಹಸಿರು ಪರಿಸರ ಕಣ್ಮನಗಳಿಗೆ ತಂಪು ನೀಡಿತು. ಬದುಕಿನ ಸ್ವಾರಸ್ಯವನ್ನು ಲಯ ಬದ್ಧವಾಗಿ ವಿವರಿಸಿದ ಅರ್ಥಪೂರ್ಣ ಕಾದಂಬರಿಯಿದು ಎಂಬುದು ನನ್ನ ಅನಿಸಿಕೆ.
🖋️-ಅನರ್ಘ್ಯ ಟಿ ಪಿ

Leave a comment

Design a site like this with WordPress.com
Get started