ಈ ಪುಸ್ತಕದ ಮೊದಲ ಕೆಲವು ಪುಟಗಳನ್ನು ಓದಿದಾಗ ನನ್ನ ವಯಸ್ಸಿಗೆ ಮೀರಿದ ವಿಷಯದ ಕುರಿತು ನಾನು ಓದುತ್ತಿದ್ದೇನೆಯೆ ಎಂಬ ಅನುಮಾನ ಮೊಳಕೆಯೊಡೆದದ್ದು ನಿಜ. ಆದರೆ ಕೈಗೆತ್ತಿಕೊಂಡ ಪುಸ್ತಕವನ್ನು ಕೆಳಗಿಡುವುದು ಬೇಡ ಎಂದು ನಿಶ್ಚಯಿಸಿ ಓದ ತೊಡಗಿದೆ. ಈ ಓದು ಒಂದು ಹೊಸ ಅನುಭವ, ಸಾಕಷ್ಟು ಗೊತ್ತಿಲ್ಲದ ವಿಷಯಗಳನ್ನು ತಿಳಿಸಿಕೊಟ್ಟಿತು. ಪೂರ್ಣ ಪ್ರಮಾಣದಲ್ಲಿ ನನಗೆ ಇದರ ಸಾರ ಅರ್ಥವಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ ನನ್ನ ಈ ಓದಿನ ಅನುಭವವನ್ನು, ನನಗೆ ಅರ್ಥ ಆದ ವಿಷಯವನ್ನು ನಾನು ಇಲ್ಲಿ ಹಂಚಿಕೊಳ್ಳುತ್ತೇನೆ.
ಎರಡು ಬೇರೆ ಬೇರೆ ಕುಟುಂಬಗಳ ಕಥೆ ಎಂದು ನಮಗೆ ಮೇಲ್ನೋಟಕ್ಕೆ ಕಾಣುವುದಾದರೂ ಇದರೊಳಗೇ ಸಾಕಷ್ಟು ಉಪ ಕಥೆಗಳೂ ಅಡಗಿವೆ. ಗಂಡು ಹೆಣ್ಣುಗಳಲ್ಲಿ ಸಹಜವಾಗಿ ಮೂಡುವ ಕಾಮನೆಗಳು, ದೈಹಿಕ ಸುಖದ ಹಸಿವು, ಹತೋಟಿಗೆ ಬಾರದ ಮನಸ್ಸು, ಆಕರ್ಷಣೆ, ಸಂಸಾರವೆಂಬ ಸಾಗರದಲ್ಲಿ ಉತ್ಪತ್ತಿಯಾಗುವ ಘರ್ಷಣೆ, ಸ್ವಾಭಿಮಾನ, ಹಠ, ವಿಚ್ಛೇದನೆ, ಕಾನೂನು, ತಮ್ಮ ಅನುಕೂಲಕ್ಕೆ ಬೇಕಾದಂತೆ ಕಾನೂನನ್ನು ವಿಮರ್ಶಿಸುವ ಮಹಿಳಾ ವಕೀಲೆಯರು, ಭ್ರಷ್ಟಾಚಾರ, ಲಂಚ, ಬಡತನ, ಶ್ರೀಮಂತಿಕೆ, ಸಾಂಪ್ರದಾಯ, ಮೋಸ, ಅನ್ಯಾಯ ಹೀಗೆ ಎಲ್ಲಾ ವಿಷಯಗಳನ್ನು ಒಳಗೊಂಡಿರುವ ಒಂದು ರೀತಿಯಲ್ಲಿ ಪರಿಪೂರ್ಣ ಕೃತಿ ಇದು ಎಂದರೆ ತಪ್ಪಾಗಲಾರದು.
ಭಾರತೀಯರ ಸಂಸ್ಕಾರ, ಆಚಾರ ವಿಚಾರಗಳನ್ನು ವಿರೋಧಿಸುವ, ಪಾಶ್ಚಾತ್ಯ ದೇಶದ ರೀತಿ ನೀತಿಗಳನ್ನು ಇಷ್ಟ ಪಡುವ ಇಳಾ ಮೇಡಂ, ಅವಳ ಪಾಠದಿಂದ ಪ್ರಚೋದಿತಳಾದಂತೆ ಇರುವ ಅವಳ ಶಿಷ್ಯೆ ಮಂಗಳೆ. ತನ್ನ ನೌಕರಿಯನ್ನು ಬಿಟ್ಟು ಬೇರೆ ಊರಿಗೆ ವರ್ಗಾವಣೆ ಹೊಂದಿದ ಗಂಡನನ್ನು ಹಿಂಬಾಲಿಸದ ಇಳಾ ಇತ್ತ ಗಂಡನಿಗೆ ಪಾಠ ಕಲಿಸಬೇಕು ಎಂದು ವಿಚ್ಛೇದನೆಯನ್ನೂ ಕೊಡದೆ, ಅತ್ತ ಸಂಸಾರವೂ ಮಾಡದೆ ಮುಂದೆ ದೈಹಿಕ ಸುಖದ ಆಸೆಯಿಂದ ಮಂತ್ರಿಯೊಬ್ಬನ ಹಿಂದೆ ಬೀಳುತ್ತಾಳೆ. ಹೆಂಡತಿಯನ್ನು ಅಪಘಾತದಲ್ಲಿ ಕಳೆದುಕೊಂಡು ಜಯಕುಮಾರ್ ದೈಹಿಕ ಸುಖದ ಆಸೆಯಿಂದ ತನ್ನ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಮಂಗಳೆಯನ್ನು ಬಳಸಿ ಮುಂದೆ ಅವಳು ಇವನನ್ನು ಮದುವೆಯ ಬಂಧನಕ್ಕೆ ಒಳಪಡಿಸುವುದು. ಇಲ್ಲಿಂದ ಆರಂಭಗೊಳ್ಳುವ ಕಥೆ ಮುಂದೆ ತಿರುವು ಪಡೆಯುವ ರೀತಿ ಕಲ್ಪನೆಗೂ ಮೀರಿದ್ದು.

ಜಯಕುಮಾರ್ ಅನುಭವಿಸುವ ಸಂಕಷ್ಟ, ಜೈಲು ಶಿಕ್ಷೆ, ಇತ್ತ ತಾಯಿ ಇಲ್ಲದ – ಮೆದುಳಿಗೆ ಬಿದ್ದ ಪೆಟ್ಟಿನಿಂದ ಬುದ್ದಿ ಶಕ್ತಿಯನ್ನು ಕಳೆದುಕೊಂಡು ಮಗಳು, ಸೊಸೆಯ ಆರೋಪದಿಂದ ಜೈಲು ಶಿಕ್ಷೆ ಅನುಭವಿಸಿದ ಅವನ ತಾಯಿ, ಪಾಶ್ಚಾತ್ಯ ಹೆಣ್ಣುಮಕ್ಕಳಿಂದ ಮೋಸ ಹೋದ ಸೋದರಳಿಯ, ಅತ್ತ ತಾಯಿಯ ಪ್ರೀತಿಯಿಂದ ವಂಚಿತಳಾದ ಇಳಾಲ ಮಗಳ ಕಥೆ – ಈ ಎಲ್ಲಾ ಘಟನೆಗಳನ್ನು ಓದುವಾಗ ಮನಸ್ಸು ಎಷ್ಟೋ ಬಾರಿ ಅಲ್ಲೋಲ ಕಲ್ಲೋಲವಾದದ್ದು ಇದೆ. ಹಾಗೆ ಅತಿಯಾದ ಮಹಿಳಾ ಪರ ಕಾನೂನುಗಳು, ಪುರುಷರ ತಪ್ಪಿಲ್ಲದಿದ್ದರೂ ಅವರನ್ನು ಅನ್ಯಾಯವಾಗಿ ಬಲಿಪಶುಗಳನ್ನಾಗಿ ಮಾಡಿದ್ದು ಇವೆಲ್ಲವೂ ಕೋಪವನ್ನೂ ತರಿಸಿತು ( ಬಹುಷಃ ಓದಿನಲ್ಲಿ ಅಷ್ಟು ತಾಲ್ಲೀನಳಾಗಿ ಬಿಟ್ಟಿದ್ದೆ ).
ಲೇಖಕರು ಎಲ್ಲಿಯೂ ಯಾವ ಪಾತ್ರದ ಪರ ವಿರೋಧವಾಗಿ ಮಾತನಾಡದೆ ಪಾತ್ರಗಳಿಗೆ ಜೀವ ತುಂಬಿದ ರೀತಿ ಅದ್ಭುತ. ವಾಸ್ತವವನ್ನು ನೇರ – ದಿಟ್ಟವಾಗಿ ಚಿತ್ರಿಸಿದ ರೀತಿ ನನಗೆ ತುಂಬಾ ಇಷ್ಟವಾಯಿತು. ಪ್ರತಿನಿತ್ಯ ಇಂತಹ ಅದೆಷ್ಟೋ ಪ್ರಕರಣಗಳು ನಡೆಯುತ್ತವೆ, ಆದರೆ ಹಣವೆಂಬ ಮಾಯಾ ಸಾಧನ ಎಲ್ಲವನ್ನೂ ಮುಚ್ಚಿ ಹಾಕುತ್ತದೆ. Feminism ದೃಷ್ಟಿಕೋನದಿಂದ ನೋಡುವವರಿಗೆ ಈ ಕೃತಿ ಇಷ್ಟವಾಗದೆ ಇರಬಹುದು. ಆದರೆ ನಮ್ಮ ಸುತ್ತ ಮುತ್ತ ನಡೆಯುವ, ಬೆಳಕಿಗೆ ಬಾರದ ದುರಂತಗಳ ಬಗ್ಗೆ ತಿಳಿದುಕೊಳ್ಳಲು, ಕಾನೂನು ಹೇಗೆ ಕೆಲಸಕ್ಕೆ ಬರುತ್ತದೆ ಎಂದು ತಿಳಿದುಕೊಳ್ಳಲು, ಈ ಪುಸ್ತಕವನ್ನು ಓದಿ.
