‘ಹೇಳದೇ ಉಳಿದದ್ದು’ ಕುರಿತು ಹೇಳಲೇ ಬೇಕಾದ ವಿಷಯಗಳು… 

ಕೃತಿಯ ಹೆಸರು : ಹೇಳದೇ ಉಳಿದದ್ದು 

ಲೇಖಕರು : ಪ್ರೊ. ಟಿ. ಶ್ರೀಕೃಷ್ಣ ಭಟ್ ಸುಳ್ಯ 

ಪ್ರಕಾಶಕರು : ಕೃತಿ ಪ್ರಕಾಶನ 

ಕಥೆ, ಕವನ ಮತ್ತು ಕಾದಂಬರಿಗಳನ್ನು ಹೊರತು ಪಡಿಸಿ ನಾನು ಇಷ್ಟ ಪಡುವ ಮತ್ತೊಂದು ಸಾಹಿತ್ಯ ಪ್ರಕಾರವೆಂದರೆ ಅದು ಆತ್ಮಕಥನ.

 ಪ್ರಸ್ತುತ ಕೃತಿ ನನ್ನ ದೊಡ್ಡಪ್ಪ ಪ್ರೊ. ಟಿ. ಶ್ರೀ ಕೃಷ್ಣ ಭಟ್ ಅವರ ಆತ್ಮಕಥೆ. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಅವರು ತಮ್ಮ ಜೀವನದ ರೋಚಕ ಅನುಭವಗಳನ್ನು, ವೃತ್ತಿ ಜೀವನದಲ್ಲಿ ಎದುರಾದ ಸವಾಲು, ಅವುಗಳನ್ನು ಬಗೆಹರಿಸಿದ ರೀತಿ, ತಮ್ಮ ಶಿಸ್ತು ಬದ್ಧ ಜೀವನ ಕ್ರಮದ ಬಗ್ಗೆ ಬಹಳ ಸೊಗಸಾಗಿ ಬರೆದಿದ್ದಾರೆ. 

ದೊಡ್ಡಪ್ಪನವರ ಬಾಲ್ಯದ ದಿನಗಳ ಕುರಿತು ಓದುವಾಗ ನನ್ನ ತಂದೆಯವರು ಅಜ್ಜನ ಕುರಿತು ಹೇಳುತ್ತಿದ ವಿಷಯಗಳೆಲ್ಲವು ನೆನಪಿಗೆ ಬಂದವು. ಒಂದು ಕೂಡು ಕುಟುಂಬವು ಹೇಗೆ ಇರುತ್ತದೆ, ಅಲ್ಲಿ ವ್ಯವಹಾರಗಳು ಹೇಗೆ ನಡೆಯುತ್ತದೆ ಎಂದು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. 

ಇಡೀ ಕೃತಿಯಲ್ಲಿ ನನಗೆ ಬಹಳ ಇಷ್ಟವಾದ ಭಾಗ ದೊಡ್ಡಪ್ಪನವರ ವೃತ್ತಿ ಜೀವನದ ಕುರಿತು. ತಪ್ಪು ಹಾದಿ ಹಿಡಿದಿದ್ದ ವಿದ್ಯಾರ್ಥಿಗಳ ಡೊಂಕನ್ನು ತಿದ್ದಿ ಅವರು ಯಶಸ್ವಿಯಾಗುವಂತೆ ಮಾಡಿದ ಘಟನೆಗಳನ್ನು ಓದಿದಾಗ ನನಗೆ ದೊಡ್ಡಪ್ಪನ ಬಗ್ಗೆ ಬಹಳ ಹೆಮ್ಮೆ ಎನಿಸಿತು. ಅವರು ಸದಾ ಹೇಳುವ ಮಾತೆಂದರೆ ‘Student psychology ಅರ್ಥ ಮಾಡಿಕೊಂಡು ನಾವು ಅವರಿಗೆ ಬುದ್ಧಿ ಹೇಳಬೇಕು’ ಎಂದು. ಅಲ್ಲದೇ ವೃತ್ತಿ ಜೀವನದಲ್ಲಿ ಅವರು ಪಾಲಿಸುತ್ತಿದ್ದ ಶಿಸ್ತು, ವೃತ್ತಿಯ ಬಗ್ಗೆ ಅವರಿಗಿದ್ದ ಪ್ರೀತಿ ಮತ್ತು ಗೌರವ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ. Profession ಮತ್ತು professional ethics ಕುರಿತು ನಾವು ಅವರಿಂದ ಕಲಿಯುವುದು ಸಾಕಷ್ಟಿದೆ. 

ಈ ಕೃತಿಯ ಇನ್ನೊಂದು ಭಾಗ ಪ್ರವಾಸ ಕಥನ. ತಮ್ಮ ಅಮೆರಿಕಾ ಪ್ರವಾಸದಲ್ಲಿ ತಾವು ಅಮೆರಿಕದ ಕುರಿತು ಅರಿತ ವಿಷಯಗಳನ್ನು facts ರೂಪದಲ್ಲಿ ಬರೆದಿದ್ದು ಬಹಳ ಇಷ್ಟವಾಯಿತು. ಆದರೆ ತಮ್ಮ ಕಾಶ್ಮೀರ ಪ್ರವಾಸ, ತಿರುಪತಿಯ ಪ್ರವಾಸದ ಕುರಿತು ಇನ್ನೂ ವಿಸ್ತಾರವಾಗಿ ಬರೆಯಬಹುದಿತ್ತೆಂದು ನನ್ನ ಅಭಿಪ್ರಾಯ. ಕೃತಿಯ ಕೊನೆಯ ಭಾಗವಾದ ಕನಸಿನ ವಿವರಣೆಯ ಬದಲು ಪ್ರವಾಸದ ಕುರಿತೇ ವಿವರಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದೆನಿಸಿತು. 

ನನಗೆ ಈ ಕೃತಿಯಲ್ಲಿ ಇಷ್ಟವಾದ ಕೆಲವು ಪ್ರಮುಖ ವಿಷಯಗಳು – ಪುಟ ತಿರುಗಿಸುವಂತೆ ಪ್ರೇರೇಪಿಸಿ, ಓದಿಸಿಕೊಂಡು ಹೋಗುವ ಸ್ಪಷ್ಟ ಬರವಣಿಗೆ ಶೈಲಿ ಹಾಗೂ ಘಟನೆಗಳನ್ನು ನಡೆದಂತೆ ವಿವರಿಸಿ ಅನಗತ್ಯ ಬಣ್ಣ ಬಣ್ಣದ ವಿಶ್ಲೇಷಣೆಗಳನ್ನು ನೀಡದೆ ಇರುವುದು. ಈ ಆತ್ಮಕಥೆಯು ಹಲವರಿಗೆ ಮಾರ್ಗದರ್ಶನ ನೀಡುವುದು, ಪ್ರೇರೇಪಿಸುವುದು ಎಂಬ ಬಲವಾದ ನಂಬಿಕೆ ನನಗಿದೆ. ಸಾಹಿತ್ಯ ಲೋಕಕ್ಕೆ ಇಂತಹ ಒಳ್ಳೆಯ, ಉತ್ತಮ ಮಾಹಿತಿಯಿಂದ ತುಂಬಿಕೊಂಡಿರುವ ಕೃತಿಯನ್ನು ನೀಡಿದ್ದಕ್ಕಾಗಿ ದೊಡ್ಡಪ್ಪನವರಿಗೆ ಹೃದಯಾಂತರಾಳದ ಧನ್ಯವಾದಗಳು. 

Leave a comment

Design a site like this with WordPress.com
Get started