ತೆಂಕುತಿಟ್ಟು ಯಕ್ಷಗಾನ ಭಾಗವತಿಕೆಯ ಅಭ್ಯಾಸಿಯಾದ ನಾನು ಕಳೆದ ಕೆಲವು ದಿನಗಳಿಂದ ಪ್ರಸಂಗಾಭ್ಯಾಸಕ್ಕೆ ಹೆಚ್ಚಿನ ಗಮನ ಹರಿಸುತ್ತಿದ್ದೇನೆ. ನನ್ನ ಭಾಗವತಿಕೆ ಕಲಿಕೆಯ ಆರಂಭದಿಂದಲೂ ಎಲ್ಲ ರೀತಿಯ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತಿರುವ ನನ್ನ ಅಣ್ಣ ಹಾಗು ಹವ್ಯಾಸಿ ಯಕ್ಷಗಾನ ಕಲಾವಿದ ಕಾರ್ತಿಕ್ ತೆಕ್ಕೇಕೆರೆ – ‘ನೀನು ಯಾವುದೇ ಪ್ರಸಂಗಕ್ಕೆ ಬಲಿಪರ ಪದ್ಯ ಹಾಗು ಪ್ರಸಂಗ ನಡೆಸುವ ಕ್ರಮವನ್ನು reference ಆಗಿ ಇಟ್ಟುಕೊ. ಬೇರೆ ಭಾಗವತರ ಪದ್ಯಗಳನ್ನು ಗಮನಿಸು, ಆದ್ರೆ ಬಲಿಪರ ಪದ್ಯಕ್ಕೆ ಮೊದಲ ಪ್ರಾಶಸ್ತ್ಯ ಇರಲಿ’ ಅಂತ ಹೇಳಿದ್ದ. ಅಂದು ಅಣ್ಣ ಯಾಕೆ ಈ ಮಾತು ಹೇಳಿದ ಅನ್ನುವ ಪ್ರಶ್ನೆಗೆ ಕೃಷ್ಣ ಪ್ರಕಾಶ್ ಉಳಿತ್ತಾಯ ಸರ್ ಅವರ ಬಲಿಪಮಾರ್ಗ ಪುಸ್ತಕ ಓದಿದ ನಂತರ ಸ್ಪಷ್ಟ ಉತ್ತರ ದೊರಕಿತು. ಲೇಖಕರು ಸ್ವತಃ ಒಬ್ಬ ಉತ್ತಮ ಮದ್ದಳೆಗಾರರು ಎಂಬುದನ್ನು ನಾವಿಲ್ಲಿ ಗಮನಿಸಬೇಕು.
ಬಲಿಪಮಾರ್ಗ ಪುಸ್ತಕವು ಬಲಿಪ ಭಾಗವತರ ಕುರಿತಾದ ಆತ್ಮಕಥನ ಅಲ್ಲ. ಬದಲಾಗಿ ಇದೊಂದು ಉತ್ತಮ ಸಂಶೋಧನಾ ಕೃತಿ ಎಂಬುದು ನನ್ನ ಅಭಿಪ್ರಾಯ. ಹಿರಿಯ ಬಲಿಪ ನಾರಾಯಣ ಭಾಗವತರಿಂದ ಆರಂಭಗೊಂಡ ಗಾನ ಪರಂಪರೆ, ಅದನ್ನು ಅವರು ಕಿರಿಯ ಬಲಿಪ ಭಾಗವತರಿಗೆ ಹಸ್ತಾಂತರಿಸಿದ ರೀತಿ, ಈ ಇಬ್ಬರೂ ದಿಗ್ಗಜರು ಯಕ್ಷಗಾನಕ್ಕೆ ನೀಡಿದ ಕೊಡುಗೆ, ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಯಕ್ಷಗಾನಕ್ಕೆಂದು ಮೀಸಲಿಟ್ಟದ್ದು, ಕಲೆಯ ಬಗೆಗಿನ ಪ್ರೀತಿ, ಕಾಳಜಿ, ನಿಷ್ಠೆ, ಇತ್ಯಾದಿಗಳನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಈ ಕೃತಿಯ ವೈಶಿಷ್ಟ್ಯ – ಇದರ chapterization ಮತ್ತು ಪ್ರತಿಯೊಂದು ಅಧ್ಯಾಯದಲ್ಲಿ ಎದ್ದು ಕಾಣುವ ಲೇಖಕರ ಅಧ್ಯಯನ. ಯಕ್ಷಗಾನದ ತಾಂತ್ರಿಕ ವಿಷಯಗಳಾದ ಹಾಡುವಿಕೆಯ ಕ್ರಮಗಳು, ಪ್ರಸಂಗ ರಚನೆಯ ಹಿಂದಿನ ಶ್ರಮ, ರಂಗದಲ್ಲಿ ಒಟ್ಟಂದದ ಪರಿಣಾಮಕ್ಕೆ ಹಿಮ್ಮೇಳವನ್ನು ಬಳಸಿಕೊಳ್ಳುವ ಕ್ರಮ ಹಾಗು ಇತರೆ ಸೂಕ್ಷ್ಮಗಳನ್ನೂ ಇಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ. ಈ ಪುಸ್ತಕವು ಸಂಶೋಧನಾ ಕೃತಿ ಎಂದು ಹೇಳಲು ಇನ್ನೂ ಕೆಲವು ಕಾರಣಗಳಿದೆ. ಒಬ್ಬ PhD scholar ಆಗಿ ನನ್ನ ದಿನವೊಂದರ ಹೆಚ್ಚಿನ ಸಮಯವು ಸಂಶೋಧನಾ ಲೇಖನಗಳನ್ನು ಓದಲು ಮೀಸಲು. ಓದುವಾಗ ನಾವು ಗಮನ ಕೊಡುವ ಕೆಲವು ಅಂಶಗಳು ಎಂದರೆ ಅಲ್ಲಿ ಬಳಸಿರುವ ದತ್ತಾಂಶ ಸಂಗ್ರಹಿಸಿರುವ ರೀತಿ, ಮಾನ್ಯತೆ, ಸಂಶೋಧನೆಯ ವ್ಯಾಖ್ಯಾನ ಹಾಗು ಸೂಕ್ತ ಉಲ್ಲೇಖನ. ಈ ಕೃತಿಯಲ್ಲಿ ಬಳಕೆಯಾದ ಡಾಟ – ಲೇಖಕರಿಗೆ ಹಿರಿಯ ಕಲಾವಿದರ ಒಡನಾಟ ನೀಡಿದ ಅನುಭವ, ಹಿರಿಯರ ಕುರಿತಾಗಿ ಇರುವ ಇತರೇ ಕೃತಿಗಳಲ್ಲಿ ನಮೂದಿಸಿದ ವಿಷಯ ಮತ್ತು ಒಡನಾಡಿ ಕಲಾವಿದರು ಒದಗಿಸಿದ ಮಾಹಿತಿ. ಇನ್ನೊಂದು ಉತ್ತಮ ವಿಚಾರವೆಂದರೆ ಈ ಕೃತಿಯ ಹೆಚ್ಚಿನ ಅಧ್ಯಾಯಗಳನ್ನು ಬಲಿಪ ಭಾಗವತರೇ ಓದಿ ಸಮ್ಮತಿಸಿದ್ದು. ಅದಲ್ಲದೇ, ಲೇಖಕರು ಬೇರೆ ಬೇರೆ ಕೃತಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸುವ ಮೂಲಕ ಸಂಶೋಧನೆಯ ನೀತಿ ನಿಯಮಗಳನ್ನು ಎಲ್ಲಿಯೂ ಉಲ್ಲಂಘಿಸಲಿಲ್ಲ.
ಈಗಿನ ಯಕ್ಷಗಾನ ಕಲಾವಿದರಿಗೆ, ಅದರಲ್ಲಿಯೂ ಹಿಮ್ಮೇಳ ಕಲಿಕೆಗೆ ಆಸಕ್ತಿ ತೋರಿಸುವವರು ಈ ಕೃತಿಯಲ್ಲಿ ತಿಳಿಸಿದ ವಿಚಾರಗಳನ್ನು ಅಗತ್ಯವಾಗಿ ಓದಿ, ಅಳವಡಿಸಲೂ ಬೇಕು. ಭಾಗವತಿಕೆ ಎಂದರೆ ಕೇವಲ ಆಕರ್ಷಕ ಧ್ವನಿ, ರಾಗಗಳನ್ನು ಬಳಸಿ ಹಾಡುವುದೂ ಅಲ್ಲ. ಇದರ ಜೊತೆಗೆ ಇಡೀ ರಂಗಸ್ಥಳವನ್ನು ನಿಯಂತ್ರಿಸುವ ಸಾಮರ್ಥ್ಯ, ಯಾವ ಪಾತ್ರ ಏನು, ಹೇಗೆ ಮಾತನಾಡಬೇಕು, ಅಗತ್ಯ ಬಿದ್ದರೆ ಪದ್ಯಗಳನ್ನು ರಚಿಸುವುದು, ಕನಿಷ್ಠ 20 ಪ್ರಸಂಗಗಳ ಕಂಠಪಾಠವಾಗಿರಬೇಕು ಎಂಬುದನ್ನು ಬಲಿಪ ಭಾಗವತರೇ ತಿಳಿಸಿದ್ದಾರೆ. ಅದಲ್ಲದೇ ಹಿಂದಿನ ಯಕ್ಷಗಾನದಲ್ಲಿ ಇದ್ದ ಕ್ರಮ, ವಿಶೇಷಗಳನ್ನೂ ಈ ಕೃತಿಯಲ್ಲಿ ಲೇಖಕರು ತಿಳಿಸಿದ್ದಾರೆ. ಉದಾಹರಣೆಗೆ, ಹಿಂದಿನ ದಿನಗಳಲ್ಲಿ ಇದ್ದ ಕಥಾಸಾರ, ಖಂಜೀರದ ಬಳಕೆಯ ಬಗ್ಗೆ ಗೊತ್ತಾದದ್ದು ಈ ಪುಸ್ತಕ ಓದಿದ ನಂತರ.
ಇತ್ತೀಚಿನ ದಿನಗಳಲ್ಲಿ ಬಿಡಿತ ಮುಕ್ತಾಯಗಳ ಮುಂಚೆ ಸಾಮಾನ್ಯವಾಗಿ ನಾಟ್ಯಕ್ಕೆ ಅನುಕೂಲವಾಗುವಂತೆ ಸಮ ಸಂಖ್ಯೆಯ ಆಲಾಪ ಮಾಡುತ್ತೇವೆ. ಆದರೆ ಪ್ರಚಾರವನ್ನು ಬಯಸುವ ಇಂದಿನ ದಿನಗಳಲ್ಲಿ, ಭಾಗವತರು ತಮ್ಮ ಕಂಠ ಸಾಮರ್ಥ್ಯ, ಸಂಗೀತದ ಬಗೆಗಿನ ಜ್ಞಾನವನ್ನು ಪ್ರದರ್ಶಿಸಲು ಆಲಾಪದ ಸುರಿಮಳೆಯನ್ನೇ ಮಾಡುವುದನ್ನು ನೋಡಿದ್ದೇವೆ. ಆದರೆ, ತಾಳವೊಂದರ ಬಿಡಿತದ ಆವರ್ತದಷ್ಟೇ ಆಲಾಪಗಳೂ ಇರಬೇಕೆಂಬುದು ಹಿಂದಿನ ಕ್ರಮವಾಗಿತ್ತು (ಕೃತಿಯಲ್ಲೂ ಇದರ ವಿವರಣೆ ಇದೆ). ಇತ್ತೀಚೆಗೆ ಅಂಡಾಲ ದೇವಿಪ್ರಸಾದ್ ಸರ್ ಅವರಲ್ಲಿ ಪ್ರಸಂಗಾಭ್ಯಾಸಕ್ಕೆ ಹೋದಾಗ ಈ ವಿಷಯವನ್ನು ತಿಳಿಸಿದ್ದರೂ ಕೂಡ.
ಬಲಿಪ ಭಾಗವತರ ಏರು ಪದ್ಯಗಳಲ್ಲಿ ಕಾಣ ಸಿಗುವ ಸೂಕ್ಷ್ಮತೆಯನ್ನು, ಭಾವ ಪೋಷಣೆಯನ್ನು ಮಾಡುತ್ತಿದ್ದ ರೀತಿಯನ್ನು ಗಮನಿಸಿ ಲೇಖಕರು ಈ ಕೃತಿಯಲ್ಲಿ ಉಲ್ಲೇಖಿಸಿರುವ ಬಗೆ ನನಗೆ ಬಹಳ ಇಷ್ಟವಾಯಿತು. ಹಾಗೆಯೇ ಬಲಿಪರ ಪ್ರಸಂಗಗಳ ಅವಲೋಕನವೂ ಒಂದಷ್ಟು ಹೊಸ ಹೊಳಹುಗಳನ್ನು ನೀಡಿತು.
ಇಲ್ಲಿ ತಿಳಿಸಿರುವ ಕೆಲವು ತಾಂತ್ರಿಕ ವಿಷಯಗಳು ಜನ ಸಾಮಾನ್ಯರಿಗೆ ಅರ್ಥವಾಗಲು ಸ್ವಲ್ಪ ಕಷ್ಟವಾಗ್ಬಹುದು. ಆದರೆ ಕಲಿಕಾ ವಿದ್ಯಾರ್ಥಿಗಳಿಗೆ ಇದೊಂದು encyclopedia ಅಂದರೆ ತಪ್ಪಾಗಲಾರದು.
ಹೀಗೊಂದು ಪುಸ್ತಕವು ಬಿಡುಗಡೆಗೆ ಸಜ್ಜಾಗುತ್ತಿದೆ ಎಂದು ಉಳಿತ್ತಾಯ ಸರ್ ಅವರ fb wall ನಲ್ಲಿ ನೋಡಿದಾಗ ನನಗೂ ಒಂದು ಪ್ರತಿ ಬೇಕೆಂದು ಒಂದು ಸಂದೇಶವನ್ನು ಕಳಿಸಿದ್ದೆ. ಬಹಳ ಪ್ರೀತಿ ಹಾಗು ವಿಶ್ವಾಸವಿತ್ತು ಈ ಪುಸ್ತಕವನ್ನು ಗೌರವ ಪ್ರತಿ ಎಂದು ಕಳಿಸಿ ನಮ್ಮಂತಹ ಕಲಿಕಾಸಕ್ತರಿಗೆ ಸಹಾಯವಾಗುವಂತೆ ಅಕ್ಷರ ರೂಪದಲ್ಲಿ ಹಿರಿಯರ ಅನುಭವವನ್ನು ಹಂಚಿಕೊಂಡ ಲೇಖಕರಿಗೆ ಅನಂತ ಧನ್ಯವಾದಗಳು.
ಅನರ್ಘ್ಯ ತೆಕ್ಕೇಕೆರೆ
12/10/2025

